ನಿಮಿತ್ತ ಕಾರಣ -
	ಕಾರಣ-ಕಾರ್ಯಸಂಬಂಧವನ್ನು ಕುರಿತು ಭಾರತೀಯ ದಾರ್ಶನಿಕರು ವಿವೇಚಿಸಿರುವ ಮೂರು ಬಗೆಯ ಕಾರಣಗಳಲ್ಲೊಂದು (ಇಫಿಷಂಟ್ ಕಾಸ್). ಉಪಾದಾನ ಕಾರಣ ಮತ್ತು ಅಧಿಷ್ಠಾನ ಕಾರಣಗಳು ಉಳಿದೆರಡು. ನ್ಯಾಯ-ವೈಶೀಷಕದಲ್ಲೂ ಮೂರು ವೇದಾಂತ ದರ್ಶನಗಳಲ್ಲಿಯೂ ನಿಮಿತ್ತ ಹಾಗೂ ಉಪಾದಾನ ಕಾರಣಗಳ ವಿಶ್ಲೇಷಣೆ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ.

	ಕರ್ತೃವೇ ನಿಮಿತ್ತಕಾರಣ. ಮೂಲ ಸಾಮಗ್ರಿಯೇ ಉಪಾದಾನ ಕಾರಣ. ಉದಾಹರಣೆಗೆ-ಮಡಕೆಯ ಕರ್ತೃ ಕುಂಬಾರ. ಅದರ ಮೂಲ ಸಾಮಗ್ರಿ ಮಣ್ಣು.

	ಮೇಲಿನ ಉದಾಹರಣೆಯ ಆಧಾರದ ಮೇಲೆ ಪ್ರಪಂಚದ ಅಸ್ತಿತ್ವವನ್ನು ವಿವರಿಸುವುದು ದಾರ್ಶನಿಕರಲ್ಲಿ ವಾಡಿಕೆಯಾಗಿದೆ. ನ್ಯಾಯ-ವೈಶೇಷಿಕ ದರ್ಶನದ ಪ್ರಕಾರ ಪ್ರಪಂಚದ ನಾನಾ ವಸ್ತುಗಳೆಲ್ಲವೂ ಪರಮಾಣುಗಳ ಸಂಯೋಗದಿಂದ ಉಂಟಾಗುತ್ತವೆ: ಆದ್ದರಿಂದ ಈ ಪರಮಾಣುಗಳು ಪ್ರಪಂಚದಲ್ಲಿ ಎಲ್ಲ ವಸ್ತುಗಳ ಉಪಾದಾನ ಕಾರಣ. ಆದರೆ ಅವುಗಳ ಸಂಯೋಗ ತಾನಾಗಿಯೇ ಉಂಟಾಗಲಾರದು. ಅದನ್ನು ಉದ್ದೇಶಪೂರಿತವಾಗಿ ಉಂಟು ಮಾಡಬಲ್ಲ, ಸರ್ವಶಕ್ತಿ ಮತ್ತು ಸರ್ವಜ್ಞಾನವನ್ನು ಪಡೆದ ಒಂದು ತತ್ತ್ವವಿರಲೇಬೇಕು. ಆ ತತ್ತ್ವವನ್ನೇ ಈಶ್ವರ ಅಥವಾ ದೇವರು ಎಂದು ಕರೆಯುತ್ತಾರೆ. ಆದ್ದರಿಂದ, ಸರ್ವಜ್ಞ ಮತ್ತು ಸರ್ವಶಕ್ತನಾದ ಈಶ್ವರನೇ ಪ್ರಪಂಚದ ನಿಮಿತ್ತ ಕಾರಣ.

	ಮೂರು ವೇದಾಂತದರ್ಶನಗಳೂ ಬ್ರಹ್ಮವನ್ನು ಪ್ರಪಂಚದ ಅಧಿಷ್ಠಾನವನ್ನಾಗಿ ಒಪ್ಪುತ್ತದೆ; ಅಧಿಷ್ಠಾನವೆಂದರೆ ಆಧಾರ, ನೆಲೆ ಅಥವಾ ಆಶ್ರಯ. ಆದರೆ, ನಿಮಿತ್ತ ಕಾರಣ ಮತ್ತು ಉಪಾದಾನ ಕಾರಣಗಳ ನಿರೂಪಣೆಯಲ್ಲಿ ಮೂರು ವೇದಾಂತಗಳಲ್ಲಿಯೂ ಪರಸ್ಪರ ವ್ಯತ್ಯಾಸಗಳು ಕಂಡುಬರುತ್ತವೆ.
ಅದ್ವೈತ ವೇದಂತದ ಪ್ರಕಾರ ಸಗುಣ ಬ್ರಹ್ಮ ಅಥವಾ ಈಶ್ವರ ಪ್ರಪಂಚದ ನಿಮಿತ್ತ ಕಾರಣ; ಈಶ್ವರ ಸರ್ವಜ್ಞ ಮತ್ತು ಸರ್ವಶಕ್ತ; ಆದರೆ ಅಂತಿಮ ಸತ್ಯವಲ್ಲ; ಮಾಯಾಕಲ್ಪಿತ; ಎಂದರೆ ಅಜ್ಞಾನದ ದೆಸೆಯಿಂದ ಕಂಡುಬರುವ ತತ್ತ್ವ. ಮಾಯೆಯೇ ವಿವಿಧ ನಾಮ, ರೂಪಗಳಿಂದ ಕೂಡಿದ ವಸ್ತುಗಳನ್ನೊಳಗೊಂಡ ಪ್ರಪಂಚಕ್ಕೆ ಉಪಾದಾನ ಕಾರಣ. ಆದರೆ ಮಾಯೆ ತನ್ನಲ್ಲಿಯೇ ಸತ್ತ್ವವನ್ನು ಹೊಂದಿಲ್ಲ; ಬ್ರಹ್ಮದ ಆಧಾರವನ್ನು ಪಡೆದಿರುವುದರಿಂದಲೇ ಅದು ಉಪಾದಾನ ಕಾರಣವಾಗಿ ಪರಿಗಣಿತವಾಗುತ್ತದೆ.

	2 ವಿಶಿಷ್ಟಾದ್ವೈತ ವೇದಾಂತದ ಪ್ರಕಾರ ಈಶ್ವರ ಅಥವಾ ಸಗುಣ ಬ್ರಹ್ಮವೇ ಅಂತಿಮ ಸತ್ಯ. ಅದೇ ಪ್ರಪಂಚದ ನಿಮಿತ್ತ ಕಾರಣ ಮತ್ತು ಉಪಾದಾನ ಕಾರಣ.

	ಪ್ರಪಂಚದ ವಸ್ತುಗಳಲ್ಲಿ ಎರಡು ವಿಧ-ಚಿತ್ ಮತ್ತು ಅಚಿತ್; ಎಂದರೆ, ಅರಿವುಳ್ಳ ಜೀವಾತ್ಮಗಳು ಮತ್ತು ಅರಿವಿಲ್ಲದ ವಸ್ತುಗಳು. ಸ್ಥಲವಾದ ಸ್ಥಿತಿಗೆ ಬರುವುದಕ್ಕೆ ಮುಂಚೆ, ಇವು ಸೂಕ್ಷ್ಮವಾದ ಸ್ಥಿತಿಯಲ್ಲಿದ್ದಿರಲೇಬೇಕು. ಅದನ್ನು ಸೂಕ್ಷ್ಮ ಚಿದಚಿತ್ ಎಂದು ಕರೆಯುತ್ತಾರೆ. ಇದು ಸ್ಥೂಲಚಿದಚಿತ್ ಆಗಿ ಮಾರ್ಪಟ್ಟಾಗ ಪ್ರಪಂಚ ಅಸ್ತಿತ್ವಕ್ಕೆ ಬರುತ್ತದೆ. ಆದರೆ ಈ ರೀತಿ ತನ್ನಷ್ಟಕ್ಕೆ ತಾನೇ ಮಾರ್ಪಡುವ ಶಕ್ತಿ ಸೂಕ್ಷ್ಮಚಿದಚಿತ್‍ನಲ್ಲಿಲ್ಲ. ಆದ್ದರಿಂದ ಬ್ರಹ್ಮವೇ ಅದರಲ್ಲಿದ್ದುಕೊಂಡು, ಮಾರ್ಪಾಡಿಗೆ ಕಾರಣವಾಗುತ್ತದೆಂದು ಹೇಳಬೇಕಾಗುತ್ತದೆ. ಈ ರೀತಿ, ಬ್ರಹ್ಮ ಸೂಕ್ಷ್ಮ ಮತ್ತು ಸ್ಥೂಲ ಚಿದಚಿತ್‍ಗಳೆರಡರಲ್ಲಿಯೂ ಇದ್ದುಕೊಂಡು, ಸೂಕ್ಷ್ಮಾವಸ್ಥೆಯಿಂದ ಸ್ಥೂಲಾವಸ್ಥೆಗೆ ಮಾರ್ಪಾಡುವುದಕ್ಕೆ ಆಂತರಿಕವಾಗಿ ಕಾರಣವಾಗಿರುತ್ತದೆ. ಈ ಅರ್ಥದಲ್ಲಿ ಬ್ರಹ್ಮ ಪ್ರಪಂಚದ ಉಪಾದಾನ ಕಾರಣವಾಗಿ ವಿಶಿಷ್ಟಾದ್ವೈತವೇದಾಂತದಲ್ಲಿ ಪರಿಗಣಿಸಲ್ಪಟ್ಟಿದೆ. ಆದರೆ ಈ ರೀತಿಯಾದ ಮಾರ್ಪಾಟಿನಿಂದ ಬ್ರಹ್ಮದ ಸ್ವರೂಪ ಯಾವ ಬದಲಾವಣೆಯನ್ನೂ ಹೊಂದುವುದಿಲ್ಲವೆಂದೂ ಬದಲಾವಣೆ ಕೇವಲ ಬ್ರಹ್ಮದ ಅಂಶಗಳಾದ ಚಿತ್ ಮತ್ತು ಅಚಿತ್‍ಗಳಿಗೆ ಸೀಮಿತವೆಂದೂ ಹೇಳಲಾಗಿದೆ.

	ಈ ರೀತಿ ಪ್ರಪಂಚದಲ್ಲಿ ಕಾರಣಭೂತವಾಗಿ ಅಡಗಿರುವ ಬ್ರಹ್ಮ ಅದರ ಹೊರಗೂ ಇದ್ದುಕೊಂಡು, ಅದನ್ನು ನಿಯಂತ್ರಿಸುವ ಶಕ್ತಿಯೂ ಆಗಿರುತ್ತದೇ; ಈ ಶಕ್ತಿ ಸರ್ವಜ್ಞ ಮತ್ತು ಸರ್ವಶಕ್ತ; ಇದೇ ಪ್ರಪಂಚದ ನಿಮಿತ್ತ ಕಾರಣವಾದ ಈಶ್ವರ ತತ್ತ್ವ ಅಥವಾ ಸಗುಣ ಬ್ರಹ್ಮ.

	(3) ದ್ವೈತ ವೇದಾಂತ ಉಪನಿಷತ್ತುಗಳ ಪ್ರಕಾರ ನಿರ್ವಿಕಾರವೆಂದು ಬಣ್ಣಿಸಲ್ಪಟ್ಟಿರುವ ಬ್ರಹ್ಮವನ್ನು ಯಾವ ಅರ್ಥದಲ್ಲಿಯೂ ಉಪಾದಾನ ಕಾರಣವೆಂದು ಹೇಳುವುದು ಸಮರ್ಪಕವಲ್ಲವೆಂದು ವಾದಿಸುತ್ತದೆ. ಸರ್ವಜ್ಞ , ಸರ್ವಶಕ್ತ ಮತ್ತು ನಿರ್ವಿಕಾರವಾದ ಬ್ರಹ್ಮ ಪ್ರಪಂಚದ ಕೇವಲ ನಿಮಿತ್ತ ಕಾರಣ ಮಾತ್ರವೆಂದು ನಿರೂಪಿಸುತ್ತದೆ.

	(ನೋಡಿ- ಅಧಿಷ್ಠಾನ)
(ಜಿ.ಎಸ್.ಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ